ಚೆರುಶ್ಯೇರಿ ನಂಬೂದಿರಿ
ಮಲಯಾಳಂ ಸಾಹಿತ್ಯದಲ್ಲಿ ಪ್ರಸಿದ್ಧನಾದ ಒಬ್ಬ ಕವಿ. ಕಾಲ, ಹದಿನೈದನೆಯ ಶತಮಾನ. ಕೃತಿ, ಕೃಷ್ಣಗಾಥಾ, ಮಣಿ ಪ್ರವಳ ಕಾಲಘಟ್ಟದಲ್ಲಿ ಬದುಕಿದ್ದ ಕವಿಯಾದರೂ ಅದರ ಪ್ರಭಾವಕ್ಕೆ ಸಂಪೂರ್ಣ ಸಂಸ್ಕøತ ಬೆರಕೆಯನ್ನು ಆತ ತನ್ನ ಕಾವ್ಯದಲ್ಲಿ ಅಂಗೀಕರಿಸಲಿಲ್ಲ. ವ್ಯವಹಾರ ಭಾಷೆಗೆ ತೀರ ಹತ್ತಿರವಾದ ಒಂದು ಶೈಲಿಯನ್ನು ಆತ ಕಂಡುಕೊಂಡು ಅದನ್ನೇ ಕಾವ್ಯದಲ್ಲಿ ಬಳಸಿದ್ದಾನೆ. ಕವಿ ಪ್ರಗಲ್ಭ ಪಂಡಿತನಾಗಿದ್ದುದಲ್ಲದೆ ಪುರಾಣೇತಿಹಾಸಗಳಲ್ಲಿ ಚೆನ್ನಾಗಿ ಪಳಗಿದ ವ್ಯಕ್ತಿಯೂ ಆಗಿದ್ದ. ಆದರೂ ತನ್ನವರಿಗೆ, ತನ್ನ ಭಾಷೆಯಲ್ಲಿ ಕಾವ್ಯರಚನೆ ಮಾಡುತ್ತಿದ್ದೇನೆ ಎಂಬುದನ್ನು ಆತ ಎಂದೂ ಮರೆಯಲಿಲ್ಲ. ಎ¿ುತ್ತಚ್ಚನಿಗಿಂತ ಮೊದಲು ಪುರಾಣಕತೆಗಳನ್ನು ಕಾವ್ಯದಲ್ಲಿ ಅಳವಡಿಸಿಕೊಂಡ ಕವಿಗಳಲ್ಲಿ ಆತ ತೀರ ಪ್ರಮುಖನಾದವ. ಮಲಯಾಳಂ ಕವಿಗಳ ಪೈಕಿ ಆಧುನಿಕತೆಯನ್ನು ಮೊಟ್ಟ ಮೊದಲು ಪ್ರದರ್ಶಿಸಿದವ ಆತನೆ ಎಂದು ಹೇಳಲಾಗಿದೆ.

	ಅಕ್ಲಿಷ್ಟ ಕೋಮಲವಾದ ರಚನಾವೈಭವವೇ ಚೆರುಶ್ಶೇರಿಯ ಪ್ರಧಾನ ವೈಶಿಷ್ಟ್ಯ. ಸರಳವೂ ಋಜುವೂ ಆದ ಅವನ ಭಾಷಾ ಶೈಲಿಯಲ್ಲಿ ಅವ್ಯಕ್ತತೆಯ ಸಣ್ಣ ಕುರುಹು ಕೂಡ ಸಿಗದು. ಅರ್ಥಾಲಂಕಾರಗಳ ಸಮೃದ್ಧಿಯಲ್ಲಿ ಕೃಷ್ಣಗಾಥಾದೊಡನೆ ಹೆಗಲೆಣೆಯಾಗಿ ನಿಲ್ಲುವ ಕಾವ್ಯ ಮಲಯಾಳಂನಲ್ಲಿ ಬೇರೆ ಇಲ್ಲವೆಂದೇ ಹೇಳಬಹುದು. ಈ ಅಲಂಕಾರಗಳಲ್ಲಾದರೋ ಸ್ವಾಭಾವಿಕತೆ ತಾನೇತಾನಾಗಿ ಸ್ಫುರಿಸುತ್ತದೆ. ಉಪಮೆ, ಉತ್ಪ್ರೇಕ್ಷೆಗಳಿಗಂತೂ ಚೆರುಶ್ಶೇರಿ ಎತ್ತಿದ ಕೈ.

	ಶ್ರೀಕೃಷ್ಣನ ಬಾಲ್ಯದ ವರ್ಣನೆಯಂತೂ ಅತ್ಯಮೋಘವಾಗಿದೆ. ಅಕ್ರೂರನ ಆಗಮನ, ರಾಸಕ್ರೀಡೆ ಮೊದಲಾದ ಸನ್ನಿವೇಶಗಳಲ್ಲಂತೂ ಕವಿ ತನ್ನ ವರ್ಣನಾ ವೈಖರಿಯನ್ನು ನಿರರ್ಗಳವಾಗಿ ಹರಿಸಿದ್ದಾನೆ. ಕವಿ ಎಂಥ ವಿಷಯವನ್ನೂ ಮಾನವೀಯ ಭಾವಗಳಿಂದ ಮಧುರೀಕರಿಸಬಲ್ಲನೆಂಬುದಕ್ಕೆ ಕಂಸವಧಾನಂತರ ಶ್ರೀಕೃಷ್ಣ ನಂದಗೋಪನನ್ನು ಆಲಂಗಿಸಿ ಹೇಳುವ ಮಾತುಗಳೇ ನಿದರ್ಶನ.
	ಸರಸತೆಗೂ ಹಾಸ್ಯಕ್ಕೂ ಸಂದರ್ಭಗಳು ಲಭಿಸಿದಾಗ ಅವನ್ನು ಎಲ್ಲೂ ಅವಜ್ಞೆ ಮಾಡಿಲ್ಲ. ಸಂನ್ಯಾಸಿ ವೇಷಧಾರಿಯಾದ ಅರ್ಜುನನಿಗೆ ಭಿಕ್ಷೆ ನೀಡುವ ಸುಭದ್ರೆ ಅನುರಾಗವೇಶದಿಂದ ಉಂಟಾಗುವ ಗಾಬರಿಯ ನಿಮಿತ್ತ, ಹಣ್ಣಿಗೆ ಬದಲು ಸಿಪ್ಪೆಯನ್ನು ಬಡಿಸುವುದು-ಮೊದಲಾದ ಸಂದರ್ಭಗಳಲ್ಲಿ ಸಹಜವಾದ ಹಾಸ್ಯವನ್ನು ಬೆಳಗಿಸಿದ್ದಾನೆ.

	ಕೃಷ್ಣಗಾಥಾಕ್ಕೆ ಮಲಯಾಳಂ ಸಾಹಿತ್ಯದಲ್ಲಿ ಬಹಳ ಮುಖ್ಯವಾದ ಒಂದು ಸ್ಥಾನವಿದೆ. ಇಷ್ಟಾದರೂ ಚೆರುಶ್ಶೇರಿ ಆಚಾರ್ಯಪ್ರಭಾವವುಳ್ಳ ಕವಿಯಾಗಿ ಉಳಿಯಲಿಲ್ಲವೆಂಬುದು ಗಮನಾರ್ಹವಾದ ಸಂಗತಿ.
(ಕೆ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ